ಕೊರವಡಿಯಲ್ಲಿ ಮಹಿಳಾ ಶೌಚಾಲಯ ನಿರ್ಮಾಣ

Published on 25 Jun 2022

  • ಶಿಕ್ಷಣ

ವಿಶೇಷವಾಗಿ ಹೆಣ್ಣುಮಕ್ಕಳಿಗೆ, ಸರಿಯಾದ ನೈರ್ಮಲ್ಯ ಸೌಲಭ್ಯಗಳ ಕೊರತೆಯು ಅನೇಕ ಸ್ಥಳೀಯ ಶಾಲೆಗಳಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಇದು ಕೇವಲ ಅವರ ಶಿಕ್ಷಣಕ್ಕೆ ಅಡ್ಡಿ ಉಂಟುಮಾಡುವುದಲ್ಲದೆ ಅವರ ಆರೋಗ್ಯ ಮತ್ತು ಸುರಕ್ಷತೆಗೂ ತೊಂದರೆಯನ್ನು ಉಂಟುಮಾಡುತ್ತದೆ. ರೋಹಿತ್ ಭಟ್ ಅವರು ಸ್ಥಾಪಿಸಿದ ಚಾರಿಟೇಬಲ್ ಟ್ರಸ್ಟ್ ವೆಂಟನಾ ಫೌಂಡೇಶನ್, ಕರ್ನಾಟಕದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಶೌಚಾಲಯಗಳನ್ನು ನಿರ್ಮಿಸುವ ಉದ್ದೇಶವನ್ನು ಹಮ್ಮಿಕೊಂಡಿದೆ.

ಫೌಂಡೇಶನ್‌ನ ಇತ್ತೀಚಿನ ಯೋಜನೆಯನ್ವಯ ಸ್ಥಳೀಯ ಶಾಲೆಯಾದ ಸರ್ಕಾರಿ ಪ್ರಾಥಮಿಕ ಶಾಲೆ, ಕೊರವಡಿಯಲ್ಲಿ ಮಹಿಳಾ ಶೌಚಾಲಯ ನಿರ್ಮಾಣವಾಗಿದೆ, ಇದನ್ನು ಜೂನ್ 2022 ರಲ್ಲಿ ಶಿಲ್ಪಾ ಭಟ್ ಉದ್ಘಾಟಿಸಿದರು. ಈ ಯೋಜನೆಯಲ್ಲಿ ಆಸಕ್ತಿ ತೋರಿದಂತಹ ವಿದ್ಯಾರ್ಥಿಗಳು, ಶಿಕ್ಷಕರು, ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದ ನೆನಪಿಗಾಗಿ ವಿದ್ಯಾರ್ಥಿಗಳು ಶಾಲಾ ಉದ್ಯಾನದಲ್ಲಿ ಗಿಡಗಳನ್ನು ನೆಟ್ಟರು.

ಹೊಸ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡುವಂತೆ ಶಾಲಾ ಆಡಳಿತ ಮಂಡಳಿಯು ಫೌಂಡೇಶನ್‌ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಈ ಹಿಂದಿನ ವ್ಯವಸ್ಥೆಯು ಕಳಪೆ ಸ್ಥಿತಿಯಲ್ಲಿದ್ದು, ತಕ್ಷಣ ಗಮನಹರಿಸಬೇಕಾದ ಅವಶ್ಯಕತೆಯಿತ್ತು. ಸರಿಯಾದ ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗುತ್ತಿದ್ದು, ಅಸಮರ್ಪಕ ಸೌಲಭ್ಯಗಳಿಂದಾಗಿ ಮಹಿಳಾ ಶಿಕ್ಷಕರು ಸಹ ತೊಂದರೆಗಳನ್ನು ಎದುರಿಸುತ್ತಿದ್ದರು .

ಶಾಲೆ ಮತ್ತು ಶಾಲೆಯ ಟ್ರಸ್ಟಿಯಾದ ಶ್ರೀನಿಧಿ ಉಪಾಧ್ಯಾಯ ಅವರು ರಮೇಶ ಭಟ್ ಅವರಿಗೆ ನೀಡಿದ ಮನವಿಯನ್ನು ಆಧರಿಸಿ ಗ್ರಾಮ ಪಂಚಾಯತ್ ಮತ್ತು ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮೋದನೆಗಳನ್ನು ಪಡೆದ ನಂತರ ನಿರ್ಮಾಣದ ಪ್ರಕ್ರಿಯೆಯನ್ನು ಕೂಡಲೆ ಫೌಂಡೇಶನ್‌ ಪ್ರಾರಂಭಿಸಿತು. ಯೋಜನೆಯನ್ನು ಸ್ಥಳೀಯ ನಾಗರಿಕ ತಂಡದಿಂದ ಕಾರ್ಯಗತಗೊಳಿಸಲಾಯಿತು ಮತ್ತು ಪಾವತಿಗಳನ್ನು ಫೌಂಡೇಶನ್ ಕೈಗೊಂಡಿತು. ಶೌಚಾಲಯದ ಒಳಗಿನ ಸೌಲಭ್ಯಗಳನ್ನು ಉತ್ತಮವಾಗಿ ನಿರ್ವಹಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸುವ ಮೂಲಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಹ ಈ ಯೋಜನೆಯಲ್ಲಿ ಅತಿಯಾದ ಆಸಕ್ತಿಯನ್ನು ತೋರಿದರು. ಟೈಲ್ಸ್‌ಗಳ ಬಣ್ಣಗಳ ಆಯ್ಕೆಯು ಹುಡುಗಿಯರಿಗೆ ಆಕರ್ಷಕವಾಗಿರುವಂತೆ ಮತ್ತು ಶೇಖರಣಾ ಘಟಕಗಳು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರುವುದನ್ನು ಅವರು ಖಚಿತಪಡಿಸಿದರು.

ಈ ಯೋಜನೆಯ ಆರಂಭವು ವಿದ್ಯಾರ್ಥಿಗಳ ಮೇಲೆ, ವಿಶೇಷವಾಗಿ ಸರಿಯಾದ ನೈರ್ಮಲ್ಯ ಸೌಲಭ್ಯಗಳ ಕೊರತೆಯಿಂದ ಕಷ್ಟಪಡುತ್ತಿದ್ದ ಹುಡುಗಿಯರ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಿತು. ಹೊಸ ಶೌಚಾಲಯ ನಿರ್ಮಾಣದಿಂದಾಗಿ ಹೆಣ್ಣುಮಕ್ಕಳು ಯಾವುದೇ ಅಡೆತಡೆಯಿಲ್ಲದೆ ಶಾಲೆಗೆ ಹಾಜರಾಗಿ ವಿದ್ಯಾಭ್ಯಾಸದತ್ತ ಗಮನ ಹರಿಸಬಹುದು. ಮಹಿಳಾ ಶಿಕ್ಷಕರಿಗೆ ಸಹ ಹೊಸ ಸೌಲಭ್ಯಗಳನ್ನು ಬಳಸಿಕೊಳ್ಳಲು ಹೆಚ್ಚು ಆರಾಮದಾಯವೆನಿಸುತ್ತದೆ.

ಶೌಚಾಲಯ ನಿರ್ಮಾಣದಲ್ಲಿ ಫೌಂಡೇಶನ್‌ನ ಶ್ರಮಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ಸ್ಥಳೀಯ ಸಮುದಾಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದು ಹೆಚ್ಚು ಅಗತ್ಯವಿರುವ ಮೂಲಸೌಕರ್ಯವನ್ನು ಒದಗಿಸಿದ್ದು ಮಾತ್ರವಲ್ಲದೆ ಪ್ರದೇಶದ ಪ್ರಗತಿ ಮತ್ತು ಅಭಿವೃದ್ಧಿಯ ಸಂಕೇತವಾಗಿಯೂ ಕಾರ್ಯನಿರ್ವಹಿಸಿತು. ಜುಲೈ 2022 ರಲ್ಲಿ ನಿವೃತ್ತರಾದಂತಹ ಮುಖ್ಯೋಪಾಧ್ಯಾಯಿನಿಯು ಬೇಸಿಗೆ ರಜೆಯ ಸಮಯದಲ್ಲಿಯೂ ಶೌಚಾಲಯ ಮತ್ತು ಶಾಲಾ ಉದ್ಯಾನ ಕೆಲಸವನ್ನು ನಿರ್ವಹಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು .

ಉಡುಪಿ ಜಿಲ್ಲೆಯ ಜನರ ಜೀವನ ಸುಧಾರಿಸುವಲ್ಲಿ ವೆಂಟನಾ ಫೌಂಡೇಶನ್‌ನ ಬದ್ಧತೆಯು ಸ್ಪೂರ್ತಿದಾಯಕವಾಗಿದೆ. ನೈರ್ಮಲ್ಯ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವ ಮುತುವರ್ಜಿಯನ್ನು ತೆಗೆದುಕೊಳ್ಳುವ ಮೂಲಕ, ಫೌಂಡೇಶನ್ ಸಮುದಾಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುತ್ತಿದೆ. ಸಣ್ಣ ಮುತುವರ್ಜಿಯು ಗಮನಾರ್ಹ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಫೌಂಡೇಶನ್‌ ಸಾಕ್ಷಿಯಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಮುತುವರ್ಜಿಯನ್ನು ನಾವು ನಿರೀಕ್ಷಿಸುತ್ತೇವೆ.