ಅಭಿವೃದ್ಧಿಯ ಆರಂಭ: ಹಾವಂಜೆಯಲ್ಲಿ ಮೊದಲ ಬಾರಿಗೆ ಅರಣ್ಯೀಕರಣ ಯೋಜನೆ

Published on 23 Aug 2024

  • ಪರಿಸರ ಸಂರಕ್ಷಣೆ

ಹಸುರು ನಿರಂತರವಾಗಿ ಕಡಿಮೆಯಾಗುತ್ತಾ ಹೋಗುವುದನ್ನು ನೋಡುವಾಗ, ಪರಿಸರ ಸಂರಕ್ಷಣೆ ಮಹತ್ವದ್ದೆನಿಸುತ್ತದೆ - ಮತ್ತು ವೆಂಟನಾ ಫೌಂಡೇಶನ್ ಹಾವಂಜೆ ಗ್ರಾಮದಲ್ಲಿ ಭರವಸೆಯ ಉಪಕ್ರಮವನ್ನು ಪ್ರಾರಂಭಿಸುವ ಮೂಲಕ ಅರಣ್ಯ ಬೆಳೆಸುವತ್ತ ತನ್ನ ಮೊದಲ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ. ಈ ಯೋಜನೆಯು ಪರಿಸರ ಸಂರಕ್ಷಣೆಗೆ ಕೇವಲ ಬದ್ಧತೆಯನ್ನು ತೋರಿಸುವುದಷ್ಟೇ ಅಲ್ಲ, ಇದು ಜೀವ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸುವ ಚಿಂತನಶೀಲ ವಿಧಾನವಾಗಿದೆ.

ಶ್ರೀ ರವೀಂದ್ರ ಮತ್ತು ಶ್ರೀ ಸುದರ್ಶನ್ ನೇತೃತ್ವದ ತಂಡವು ಸ್ಪಷ್ಟ ದೃಷ್ಟಿಕೋನವನ್ನಿಟ್ಟುಕೊಂಡು ಈ ಹಸಿರು ಪ್ರಯಾಣವನ್ನು ಪ್ರಾರಂಭಿಸಿತು: ಪರಿಸರ ಸಮತೋಲನಕ್ಕೆ ಕೊಡುಗೆ ನೀಡುವುದರೊಂದಿಗೆ ಸ್ಥಳೀಯ ವನ್ಯಜೀವಿಗಳನ್ನು ಬೆಂಬಲಿಸುವ ಸುಸ್ಥಿರ ಅರಣ್ಯ ಪರಿಸರ ವ್ಯವಸ್ಥೆಯನ್ನು ರಚಿಸುವುದು ಇದರ ಧ್ಯೇಯವಾಗಿತ್ತು. ಫೌಂಡೇಶನ್‌ನ ಪ್ರಮುಖ ಕಾರ್ಯತಂತ್ರ ಹಣ್ಣಿನ ಮರಗಳನ್ನು ನೆಡುವುದು, ಪಕ್ಷಿಗಳ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಮತ್ತು ಜೀವವೈವಿಧ್ಯತೆಯನ್ನು ಹೆಚ್ಚಿಸುವಲ್ಲಿ ಮರಗಳ ಪ್ರಮುಖ ಪಾತ್ರವನ್ನು ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿದೆ.

"ಸಣ್ಣಮಟ್ಟದಲ್ಲಿ ಪ್ರಾರಂಭಿಸುವುದು ಆದರೆ ಸರಿಯಾಗಿ ಪ್ರಾರಂಭಿಸುವುದು ನಮ್ಮ ಮಂತ್ರವಾಗಿತ್ತು" ಎಂದು ಶ್ರೀ ರವೀಂದ್ರ ವಿವರಿಸುತ್ತಾರೆ. ಈ ಎಚ್ಚರಿಕೆಯ ವಿಧಾನದ ಕಾರಣ ತಂಡವು ತಜ್ಞರ ಮಾರ್ಗದರ್ಶನವನ್ನು ಪಡೆಯುವ ಯೋಚನೆ ಮಾಡಿತು, ಇದರ ಪರಿಣಾಮವಾಗಿಯೇ ಸ್ಥಳೀಯ ಕಲಾವಿದ ಶ್ರೀ ಜನಾರ್ದನ ಹಾವಂಜೆ ಅವರನ್ನು ಸಂಪರ್ಕಿಸುವ ಅದೃಷ್ಟ ದೊರಕಿತು, ಅವರು ತಮ್ಮ ಗ್ರಾಮದಲ್ಲಿ ಸಂಭಾವ್ಯ ಸೈಟ್ ಒಂದನ್ನು ಗುರುತಿಸಿದರು. ಪ್ರಾಯೋಗಿಕ ಯೋಜನೆಗಾಗಿ 25 ಸೆಂಟ್ಸ್ ಭೂಮಿಯನ್ನು ಒದಗಿಸುವ ಮೂಲಕ ಹಾವಂಜೆ ಗ್ರಾಮ ಪಂಚಾಯಿತಿಯ ಉತ್ಸಾಹಪೂರ್ಣ ಬೆಂಬಲ ಈ ಆಶಯವನ್ನು ವಾಸ್ತವಕ್ಕೆ ಪರಿವರ್ತಿಸಿತು.

ಈ ಉಪಕ್ರಮದ ಮೂಲಕ ವೈವಿಧ್ಯಮಯ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ರಚಿಸಲು ಎಚ್ಚರಿಕೆಯಿಂದ ಆಯ್ಕೆ ಮಾಡಲಾದ 250 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಆದಾಗ್ಯೂ, ಈ ಪ್ರಯಾಣದಲ್ಲಿ ಸವಾಲುಗಳು ಇಲ್ಲದಿರಲಿಲ್ಲ. ತಂಡವು ಅರಣ್ಯ ಮತ್ತು ಬೆಟ್ಟದ ಕೃಷಿಗೆ ಸಂಬಂಧಪಟ್ಟಂತೆ ಹಲವಾರು ಅಡೆತಡೆಗಳನ್ನು ಎದುರಿಸಿತು:

  • ಪ್ಲಾಂಟೇಶನ್ ಸ್ಥಳಕ್ಕೆ ತಲುಪಲು ದಾರಿಯ ಸಮಸ್ಯೆಗಳು
  • ಸವಾಲಿನ ಭೂಪ್ರದೇಶದಲ್ಲಿ ನೀರು ಪೂರೈಕೆಯ ನಿರ್ವಹಣೆ
  • ಸ್ಥಳೀಯ ಕಾಡುಪ್ರಾಣಿಗಳಿಂದ ಸಸಿಗಳ ರಕ್ಷಣೆ

ಈ ಅಡೆತಡೆಗಳ ಹೊರತಾಗಿಯೂ, ಫೌಂಡೇಶನ್‍ ನ ಬದ್ಧತೆ ಮೆಚ್ಚತಕ್ಕ ಫಲಿತಾಂಶಗಳನ್ನು ನೀಡಿದೆ. ಸತತ ಆರೈಕೆ ಮತ್ತು ಮೇಲ್ವಿಚಾರಣೆಯ ಫಲವಾಗಿ, ನೆಟ್ಟ ಸಸಿಗಳಲ್ಲಿ 80% ಸಸಿಗಳು ಬದುಕುಳಿದಿದ್ದು ಇದು ತಂಡದ ಗಮನಾರ್ಹ ಸಾಧನೆಯಾಗಿದೆ. ಈ ಮಟ್ಟಿನ ಯಶಸ್ಸು ತಂಡದ ಬದ್ಧತೆ ಮತ್ತು ಅವರ ನಿರ್ವಹಣಾ ತಂತ್ರಗಳ ಪರಿಣಾಮಕಾರಿತನದ ಬಗ್ಗೆ ಹೇಳುತ್ತದೆ.

ಮುಂದೆಯೂ ನಿಯಮಿತ ಪೋಷಣೆ ಆದ್ಯತೆಯಾಗಿ ಮುಂದುವರಿಯುತ್ತದೆ, ನಮ್ಮ ತಂಡದ ಸದಸ್ಯರು ಸಸಿಗಳ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಹೊಸ ಸವಾಲುಗಳನ್ನು ಎದುರಿಸಲು ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತಾರೆ. ಭವಿಷ್ಯದಲ್ಲಿ ಯೋಜನೆಯ ವಿಸ್ತರಣೆಗೆ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುವ ಜೊತೆಗೆ ಈ ನೇರ ಕಾರ್ಯಾಚರಣೆಯ ವಿಧಾನವು ಉಪಕ್ರಮದ ದೀರ್ಘಾವಧಿ ಯಶಸ್ಸನ್ನು ಖಚಿತಪಡಿಸುತ್ತದೆ.

"ಇದು ಸಣ್ಣಮಟ್ಟಿನ ಯೋಜನೆ ಎಂದು ಅನಿಸಬಹುದು, ಆದರೆ ಇದರ ಪರಿಣಾಮಗಳು ಗಮನಾರ್ಹವಾಗಿವೆ" ಎಂದು ಶ್ರೀ ಸುದರ್ಶನ್ ಹಂಚಿಕೊಳ್ಳುತ್ತಾರೆ. "ಇದು ನಮ್ಮ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಗಾಗಿ ನಮ್ಮ ಭವಿಷ್ಯದ ಪರಿಸರ ಉಪಕ್ರಮಗಳಿಗೆ ಮಾರ್ಗದರ್ಶನ ನೀಡುವ ಅಮೂಲ್ಯ ಪಾಠಗಳನ್ನು ಕಲಿಸುತ್ತಿದೆ."

ವೆಂಟನಾ ಫೌಂಡೇಶನ್ ಈ ಯೋಜನೆಯನ್ನು ತಮ್ಮ ಪರಿಸರ ಸಂರಕ್ಷಣಾ ಪ್ರಯಾಣದ ಒಂದು ಸಣ್ಣ ಆರಂಭ ಎಂಬಂತೆ ಪರಿಗಣಿಸುತ್ತದೆ. ಹಾವಂಜೆಯಲ್ಲಿನ ಯಶಸ್ಸು ಅವರ ಅರಣ್ಯೀಕರಣ ಪ್ರಯತ್ನಗಳನ್ನು ವಿಸ್ತರಿಸಲು ಭದ್ರ ಬುನಾದಿಯನ್ನು ಒದಗಿಸಿದೆ, ಇತರ ಪ್ರದೇಶಗಳಲ್ಲಿ ಇದೇ ರೀತಿಯ ಉಪಕ್ರಮಗಳಿಗಾಗಿ ಈಗಾಗಲೇ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಸರ ಸಂರಕ್ಷಣೆಯ ಆಶಯವನ್ನಿಟ್ಟುಕೊಂಡು ಸಮುದಾಯ ಸಂಸ್ಥೆಗಳು, ಸ್ಥಳೀಯಾಡಳಿತ ಮತ್ತು ನಿಸರ್ಗ ಪ್ರೇಮಿಗಳು ಒಟ್ಟಾಗಿ ಕೆಲಸ ಮಾಡಿದಾಗ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಪ್ರಾಯೋಗಿಕ ಯೋಜನೆ ಸಾಕ್ಷಿಯಾಗಿದೆ. ಎಚ್ಚರಿಕೆಯ ಯೋಜನೆ, ನಿರಂತರ ಪ್ರಯತ್ನ ಮತ್ತು ಸಮುದಾಯದ ಬೆಂಬಲದ ಮೂಲಕ, ವೆಂಟನಾ ಫೌಂಡೇಶನ್ ಕೇವಲ ಮರಗಳನ್ನು ನೆಡುತ್ತಿಲ್ಲ, ಆದರೆ ಹಸಿರು ಭವಿಷ್ಯಕ್ಕಾಗಿ ಕಾತರಿಸುತ್ತಿದೆ.