ನಿಟ್ಟೂರು ಪ್ರಾಥಮಿಕ ಶಾಲೆಯ ಮನರಂಜನಾ ಸಭಾಂಗಣದ ನವೀಕರಣ

Published on 17 Aug 2022

  • ಶಿಕ್ಷಣ

ಶಿಕ್ಷಣವು ಉಜ್ವಲ ಭವಿಷ್ಯದ ಬುನಾದಿಯಾಗಿದೆ - ಮತ್ತು ವೆಂಟನಾ ಫೌಂಡೇಶನ್ ನಾಳೆಯ ಉಜ್ವಲ ಭವಿಷ್ಯದ ಹಾದಿಯನ್ನು ಸುಗಮಗೊಳಿಸಲು ಗ್ರಾಮೀಣ ಶಿಕ್ಷಣವನ್ನು ಬೆಂಬಲಿಸುವಲ್ಲಿ ದೃಢವಾಗಿ ನಂಬಿಕೆ ಇಟ್ಟಿದೆ. ಜೂನ್ 2022 ರಲ್ಲಿ, ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯಿಂದ ತಮ್ಮ ಶಾಲಾ ಕಟ್ಟಡದ ದುರಸ್ತಿಗಾಗಿ ಹಣಕಾಸಿನ ಸಹಾಯದ ವಿನಂತಿಯನ್ನು ಫೌಂಡೇಶನ್ ಸ್ವೀಕರಿಸಿತು. ಶಾಲೆಯು 122 ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದೆ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಜನಪ್ರಿಯತೆಯ ಹೊರತಾಗಿಯೂ, ಇದು 200 ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳನ್ನು ಸುಶಿಕ್ಷಿತಗೊಳಿಸುತ್ತಿದೆ

ಶಾಲೆಯ ಮೂಲಸೌಕರ್ಯಕ್ಕೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಕಟ್ಟಡದಲ್ಲಿನ ಅತೀವ ದುಸ್ಥಿತಿಯಲ್ಲಿದ್ದ ಒಂದು ಸಭಾಂಗಂಣಕ್ಕೆ ತುರ್ತು ಸಹಾಯದ ಅಗತ್ಯವಿತ್ತು. ವೆಂಟನಾ ಫೌಂಡೇಶನ್‌ನ ಸದಸ್ಯರಲ್ಲಿ ಒಬ್ಬರಾದ ಶಾಲೆಯ ಹಳೆ ವಿದ್ಯಾರ್ಥಿಯಾದ ಶ್ರೀ ಗುರುರಾಜ ಭಟ್ ಅವರು ಆರ್ಥಿಕ ಸಹಾಯದ ಮನವಿಯನ್ನು ಮುಂದಿಟ್ಟರು. ಶಾಲಾ ಅಧಿಕಾರಿಗಳು ದುರಸ್ತಿಗೊಳಿಸಲಾದ ಮೇಲ್ಛಾವಣಿಯನ್ನು ತಮ್ಮ ಮುಂದಿನ ಹೊಸ ಕಟ್ಟಡದ ಯೋಜನೆಯಲ್ಲಿ ಮರುಬಳಕೆ ಮಾಡುವ ಯೋಜನೆಯನ್ನು ಹೊಂದಿದ್ದರು, ಆದ್ದರಿಂದ ಅಂದಾಜು ರೂ 12 ಲಕ್ಷ ದುರಸ್ತಿ ವೆಚ್ಚಕ್ಕೆ ಫೌಂಡೇಶನ್‌ನ ರೂ 1,00,000 ಕೊಡುಗೆಯು ಎರಡು ಉದ್ದೇಶಗಳನ್ನು ಪೂರೈಸುತ್ತದೆ.

ವೆಂಟನಾ ಫೌಂಡೇಶನ್‌ನ ಮೂಲಕ ನವೀಕರಿಸಿದ ಶಾಲೆಯ ಮನರಂಜನಾ ಸಭಾಂಗಣವು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅತಿ ಮುಖ್ಯ ಸ್ಥಳವಾಗಿದೆ. ಕೆಲವು ಸಮಯದಿಂದ ಸಭಾಂಗಣವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಲು ದುರಸ್ತಿ ಕೆಲಸವು ಅನಿವಾರ್ಯವಾಗಿತ್ತು. ಫೌಂಡೇಶನ್‌ನ ಹೂಡಿಕೆಯಿಂದ ಹಾಲ್ ಈಗ ರೋಮಾಂಚಕ ಮತ್ತು ಉಪಯುಕ್ತ ಸ್ಥಳವಾಗಿ ಮಾರ್ಪಾಡುಗೊಂಡು ವಿದ್ಯಾರ್ಥಿಗಳು ಅದನ್ನು ಈಗ ಆನಂದಿಸಬಹುದಾಗಿದೆ.

ಆಗಸ್ಟ್ 2022 ರಲ್ಲಿ, ಶ್ರೀ ಗುರುರಾಜ ಭಟ್ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು, ಅಲ್ಲಿ ಅವರು ನವೀಕರಿಸಿದ ಸಭಾಂಗಣ ಮತ್ತು ಶಾಲಾ ಸಮುದಾಯದ ಮೇಲೆ ಅದರ ಪ್ರಭಾವವನ್ನು ಗಮನಿಸಿದರು. ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯು ಈಗ ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಪ್ರತಿಭೆಯನ್ನು ಅನ್ವೇಷಿಸಲು ಮತ್ತು ವಿವಿಧ ಚಟುವಟಿಕೆಗಳ ಮೂಲಕ ಜೀವನ ಕೌಶಲಗಳನ್ನು ಅಭಿವೃದ್ಧಿಪಡಿಸಲು ಸ್ಥಳವನ್ನು ಹೊಂದಿದೆ. ನವೀಕರಿಸಿದ ಸಭಾಂಗಣವು ಶಾಲೆಯ ಹಿರಿಮೆಯಾಗಿದೆ ಎಂದು ಹೇಳುವ ಮೂಲಕ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗ ವೆಂಟನಾ ಫೌಂಡೇಶನ್‌ಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.

ವೆಂಟನಾ ಫೌಂಡೇಶನ್‌ನ ಕೊಡುಗೆಯು ಕೇವಲ ಶಾಲಾ ಕಟ್ಟಡವನ್ನು ದುರಸ್ತಿ ಮಾಡುವಲ್ಲಿ ಸಹಾಯ ಮಾಡಿದ್ದಲ್ಲದೆ ಶಾಲೆಯು ತನ್ನ ಶ್ರೀಮಂತ ಶಿಕ್ಷಣ ಪರಂಪರೆಯನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡಿದೆ. ಶಿಕ್ಷಣದ ಪರವಾಗಿ ಫೌಂಡೇಶನ್‌ನ ಬದ್ಧತೆಯು ನಿಟ್ಟೂರು ಮತ್ತು ಅದರಾಚೆಗಿನ ಅನೇಕ ವಿದ್ಯಾರ್ಥಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಿದೆ. ಶಿಕ್ಷಣವು ಬಡತನದ ಚಕ್ರವನ್ನು ಮುರಿಯಲು ಪ್ರಮುಖ ಅಸ್ತ್ರವಾಗಿದೆ ಮತ್ತು ಫೌಂಡೇಶನ್‌ನ ಬೆಂಬಲದಿಂದ, ಈ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ನಿರೀಕ್ಷಿಸಬಹುದು.

ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯ ಮನರಂಜನಾ ಸಭಾಂಗಣದ ನವೀಕರಣವು ವೆಂಟನಾ ಫೌಂಡೇಶನ್‌ ಶಿಕ್ಷಣವನ್ನು ಮತ್ತು ಸ್ಥಳೀಯ ಶಾಲೆಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ನಮ್ಮ ಸಮುದಾಯಕ್ಕೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುವಂತಹ ಇನ್ನೂ ಅನೇಕ ಉಪಕ್ರಮಗಳಿಗೆ ಕೊಡುಗೆಯನ್ನು ನೀಡಲು ಫೌಂಡೇಶನ್ ಆಶಿಸುತ್ತದೆ.