ಔರಾ ಕಲಾ ಶಾಲೆಯಲ್ಲಿ ಕಲಾತ್ಮಕ ಕನಸುಗಳನ್ನು ಪೋಷಿಸುವುದು
Published on 21 Aug 2024
- ಸಾಂಸ್ಕೃತಿಕ ಪುನರುಜ್ಜೀವನ
ಅಭಿರುಚಿ ಮತ್ತು ಧ್ಯೇಯ ಪರಸ್ಪರ ಕಲೆತಾಗ, ಪರಿವರ್ತನಕಾರಿ ಉಪಕ್ರಮಗಳು ಹುಟ್ಟಿಕೊಳ್ಳುತ್ತವೆ. ಹಿರಿಯ ಕಲಾವಿದ ಶೈಲೇಶ್ ಕೋಟ್ಯಾನ್ ಸ್ಥಾಪಿಸಿದ ಉಡುಪಿಯ ಔರಾ ಕಲಾಶಾಲೆಯ ಕಥೆ ಇದೇ ರೀತಿಯದ್ದಾಗಿದೆ, ಇಲ್ಲಿ ವಿದ್ಯಾರ್ಥಿಗಳ ಆರ್ಥಿಕ ನ್ಯೂನತೆಗಳನ್ನು ಲೆಕ್ಕಿಸದೆ ಕಲಾತ್ಮಕ ಕನಸುಗಳನ್ನು ಪೋಷಿಸಲಾಗುತ್ತದೆ. ಇತ್ತೀಚೆಗೆ, ವೆಂಟನಾ ಫೌಂಡೇಶನ್ ಸ್ಥಳೀಯ ಕಲಾ ಶಿಕ್ಷಣವನ್ನು ಬೆಳೆಸುವ ತನ್ನ ಬದ್ಧತೆಗೆ ಪ್ರತಿಯಾಗಿ ಈ ಉದಾತ್ತ ಪ್ರಯತ್ನವನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿತು.
2019 ರಲ್ಲಿ ಸ್ಥಾಪಿತವಾದ ಔರಾ ಆರ್ಟ್ ಸ್ಕೂಲ್, ಕಲಾ ಶಿಕ್ಷಣದ ಬಗ್ಗೆ ಶ್ರೀಯುತ ಶೈಲೇಶ್ ಕೋಟ್ಯಾನ್ ರವರಿಗಿರುವ ಸಮರ್ಪಣಾ ಭಾವಕ್ಕೆ ಸಾಕ್ಷಿಯಾಗಿದೆ, ಇದು ಒಬ್ಬ ಕಲಾವಿದನಾಗಿ ಮತ್ತು ಶಿಕ್ಷಣತಜ್ಞರಾಗಿ ಅವರ ಎರಡು ದಶಕಗಳ ಅಸಾಧಾರಣ ಪ್ರಯಾಣದ ಪ್ರತೀಕವಾಗಿದೆ. ಈ ಶಾಲೆ ಬರಿ ಒಂದು ಶಿಕ್ಷಣ ಸಂಸ್ಥೆಯಷ್ಟೇ ಅಲ್ಲ; ಇದು ಪ್ರತಿಭೆಗಳಿಗೆ ಅವಕಾಶವನ್ನು ಪೂರೈಸುವ ಸ್ವರ್ಗವಾಗಿದೆ, ಉಡುಪಿ ಪ್ರದೇಶದಾದ್ಯಂತದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕಲಾ ತರಬೇತಿಯನ್ನು ಒದಗಿಸುತ್ತದೆ.
ಔರಾ ಆರ್ಟ್ ಸ್ಕೂಲ್ ಉಳಿದವುಗಳಿಗಿಂತ ಪ್ರತ್ಯೇಕವಾಗಿ ನಿಲ್ಲಲು ಕಾರಣವೇನೆಂದರೆ ಕಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲರ ಅಗತ್ಯತೆಗಳಿಗೆ ತಕ್ಕಂತೆ ಶ್ರೀ ಶೈಲೇಶ್ ಕೋಟ್ಯಾನ್ ಅವರು ನೀಡುವ ಸ್ಪಂದನೆ. ಸೃಜನಾತ್ಮಕ ಸಾಮರ್ಥ್ಯಕ್ಕೆ ಯಾವುದೇ ಆರ್ಥಿಕ ಗಡಿಗಳ ಭೇದವಿಲ್ಲ ಎಂದು ಅರ್ಥಮಾಡಿಕೊಳ್ಳುವ ಮೂಲಕ, ಅವರು ಔಪಚಾರಿಕ ಕಲಾ ತರಬೇತಿಯನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ತಮ್ಮ ಪರಿಣತಿಯನ್ನು ಹಂಚುತ್ತಾರೆ. ಶಿಕ್ಷಣ ಲಭ್ಯತೆಗೆ ಅವರು ತೋರಿಸುವ ಈ ಬದ್ಧತೆಯು, ವೆಂಟನಾ ಫೌಂಡೇಶನ್‌ನ ಕಲಾ ಶಿಕ್ಷಣವನ್ನು ಎಲ್ಲರಿಗೂ ಲಭ್ಯಗೊಳಿಸುವ ಬೆಂಬಲಕಾರಿ ಉಪಕ್ರಮಗಳ ಧ್ಯೇಯದ ಜೊತೆಗೆ ಪರಿಪೂರ್ಣವಾಗಿ ವಿಲೀನಗೊಳ್ಳುತ್ತದೆ.
ಹಿಂದೊಮ್ಮೆ ಕಾರ್ಯಾಗಾರದಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಸಹಭಾಗಿತ್ವದ ಸಂಭಾವ್ಯತೆಯನ್ನು ಕಂಡುಕೊಂಡ ಫಲವಾಗಿ, ಶಾಲೆ ಮತ್ತು ವೆಂಟನಾ ಫೌಂಡೇಶನ್ ನಡುವೆ ಸಂಪರ್ಕ ಏರ್ಪಟ್ಟಿತು. ಫ್ರೀಹ್ಯಾಂಡ್ ಡ್ರಾಯಿಂಗ್ ತರಗತಿಗಳನ್ನು ನಡೆಸಲು ಶಾಲೆಯಲ್ಲಿ ಸರಿಯಾದ ಮೂಲಸೌಕರ್ಯದ ಕೊರತೆಯ ಬಗ್ಗೆ ಅರಿತ ವೆಂಟನಾ ಫೌಂಡೇಶನ್ ಸೂಕ್ತ ಕಲಿಕಾ ವಾತಾವರಣವನ್ನು ಸೃಷ್ಟಿಸಲು ಅಗತ್ಯವಿರುವ ಮೂರು ಫೋಲ್ಡೇಬಲ್ ಸ್ಟೀಲ್ ಟೇಬಲ್‌ಗಳು ಮತ್ತು ಆರು ಬೆಂಚುಗಳನ್ನು ದಾನ ಮಾಡಿತು.
"ಕಲಾ ಶಿಕ್ಷಣಕ್ಕೆ ಸರಿಯಾದ ಮೂಲಸೌಕರ್ಯ ಅತಿ ಮಹತ್ವದ್ದು" ಎಂದು ಶ್ರೀಯುತ ಶೈಲೇಶ್ ಕೋಟ್ಯಾನ್ ಹೇಳುತ್ತಾರೆ. "ಈ ಫೋಲ್ಡೇಬಲ್ ಟೇಬಲ್‌ಗಳು ಮತ್ತು ಬೆಂಚುಗಳು ನಮ್ಮ ದೈನಂದಿನ ತರಗತಿಗಳಿಗೆ ಅನುಕೂಲವಾಗುವುದರ ಜೊತೆಗೆ ನಮ್ಮ ವಾರ್ಷಿಕ ಕಲಾ ಕಾರ್ಯಕ್ರಮಗಳಿಗೆ ಕೂಡ ಉಪಯುಕ್ತವಾಗಿವೆ, ಇವು ನಮ್ಮ ಶಾಲೆಯ ಸಂಪನ್ಮೂಲಗಳಿಗೆ ಅಮೂಲ್ಯವಾದ ಸೇರ್ಪಡೆಯಾಗಿವೆ."
ದಾನ ಮಾಡಿದ ಪೀಠೋಪಕರಣಗಳ ಬಹುಉಪಯುಕ್ತತೆಯು ವಿಶೇಷವಾಗಿ ಶಾಲೆಯ ವಿವಿಧ ಚಟುವಟಿಕೆಗಳಿಗೆ ಪ್ರಯೋಜಕಾರಿಯಾಗಿದೆ. ಫೋಲ್ಡೇಬಲ್ ವಿನ್ಯಾಸವು ಬೇಕಾದ ಹಾಗೆ ಸ್ಥಳವನ್ನು ಬಳಸಲು ಅನುವು ಮಾಡಿಕೊಡುತ್ತದೆ, ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಸಮುದಾಯದಲ್ಲಿ ಕಲೆಯನ್ನು ಉತ್ತೇಜಿಸಲು ಶ್ರೀ ಕೋಟ್ಯಾನ್ ರವರು ವರ್ಷವಿಡೀ ಆಯೋಜಿಸುವ ಸಾಮಾನ್ಯ ತರಗತಿಗಳನ್ನು ನಡೆಸಲು ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಇದು ಅವಕಾಶ ಕಲ್ಪಿಸುತ್ತದೆ.
ವೆಂಟನಾ ಫೌಂಡೇಶನ್‌ನ ಈ ಬೆಂಬಲವು ಕೇವಲ ಪೀಠೋಪಕರಣ ದೇಣಿಗೆಗಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ; ಇದು ಉಡುಪಿಯ ಯುವಕರ ಕಲಾತ್ಮಕ ಭವಿಷ್ಯಕ್ಕೆ ಮಾಡಿದ ಹೂಡಿಕೆಯಾಗಿದೆ. ಔರಾ ಆರ್ಟ್ ಸ್ಕೂಲ್‌ನಂತಹ ಸಂಸ್ಥೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ, ತಳಮಟ್ಟದ ಕಲಾ ಶಿಕ್ಷಣ ಉಪಕ್ರಮಗಳನ್ನು ಬೆಂಬಲಿಸುವ ತನ್ನ ಧ್ಯೇಯವನ್ನು ಫೌಂಡೇಶನ್ ಮುಂದುವರಿಸುತ್ತದೆ.